ಮೆಟ್‍ಕಾಫ್, ಚಾಲ್ರ್ಸ್
1785-1846. ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿದ್ದ ಬ್ರಿಟಿಷ್ ಆಡಳಿತಾಧಿಕಾರಿ. ಈಸ್ಟ್ ಇಂಡಿಯಾ ಕಂಪನಿಯ ನಿರ್ದೇಶಕನಾಗಿದ್ದ ಮೇಜರ್ ತಾಮಸ್ ಮೆಟಕಾಫನ ಎರಡನೆಯ ಮಗನಾಗಿ 30 ಜನವರಿ 1785 ರಲ್ಲಿ ಕಲ್ಕತ್ತದಲ್ಲಿ ಜನಿಸಿದ. ಇಂಗ್ಲೆಂಡಿನ ಬಕಿಂಗ್‍ಹ್ಯಾಮ್ ಷೈರ್‍ನ ಈಡನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದು ತನ್ನ ಹದಿನೈದನೆಯ ವಯಸ್ಸಿನಲ್ಲಿ (1801) ಭಾರತಕ್ಕೆ ಮರಳಿ, ಕಲ್ಕತ್ತ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ. 1803 ರಲ್ಲಿ ಗವರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿಯ ಆಪ್ತಕಾರ್ಯದರ್ಶಿಯಾದ. ಮರಾಠರು ಹಾಗೂ ಬ್ರಿಟಿಷರ ನಡುವೆ ನಡೆದ ಮೂರನೆಯ ಮರಾಠರ ಯುದ್ಧದ ಸಮಯದಲ್ಲಿ (1817-18) ಜನರಲ್ ಲೇಕ್‍ನ ರಾಜಕೀಯ ಸಹಾಯಕನಾಗಿ ಸೇವೆಸಲ್ಲಿಸಿದ. ಭಾರತದ ಮೇಲೆ ಧಾಳಿ ನಡೆಸಲು ಸನ್ನದ್ಧನಾಗಿದ್ದ ನೆಪೋಲಿಯನನ್ನು ನಿವಾರಿಸುವಲ್ಲಿ ಸಿಖ್ ಜನರ ಸಹಕಾರವನ್ನು ಪಡೆಯಲು 1808 ರಲ್ಲಿ ಲಾಹೋರಿಗೆ ಪ್ರತಿನಿಧಿಯಾಗಿ ಹೋಗಿದ್ದ. ಅನಂತರ ಸೆಟ್ಲೆಜ್ ನದಿಯ ಪೂರ್ವಕ್ಕಿರುವ ಎಲ್ಲ ಸಿಖ್ ರಾಜ್ಯಗಳಿಗೆ ಬ್ರಿಟಿಷರ ರಕ್ಷಣೆ ದೊರಕುವಂತೆ ಸಿಖ್‍ರೊಡನೆ ಒಪ್ಪಂದ ಮಾಡಿಕೊಂಡ. ಅನಂತರ ಗ್ವಾಲಿಯರ್ (1810), ದೆಹಲಿ (1811-19), ಹೈದರಾಬಾದ್ (1820-22)-ಈ ಸ್ಥಳಗಳಲ್ಲಿ ಗವರ್ನರ್ ಜನರಲ್‍ನ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಬ್ಯಾರೊನೆಟ್ಸಿ ಪದವಿಗೇರಿದ.

1827ರಲ್ಲಿ ಈತ ಆಲ್ ಇಂಡಿಯಾ ಗವರ್ನಿಂಗ್ ಸುಪ್ರಿಂ ಕೌನ್ಸಿಲ್‍ನ ಸದಸ್ಯನಾದ. 1835ರ ಮಾರ್ಚ್‍ನಲ್ಲಿ ಲಾರ್ಡ್‍ವಿಲಿಯಂ ಬೆಂಟಿಕ್ ಗವರ್ನರ್ ಜನರಲ್ ಹುದ್ದೆಗೆ ರಾಜೀನಾಮೆ ಕೊಡಲಾಗಿ ಈತ ಆ ಸ್ಥಾನದಲ್ಲಿ ಹಂಗಾಮಿ ಗವರ್ನರ್ ಜನರಲ್ ಆಗಿ ನೇಮಕಗೊಂಡ. ಈ ನೇಮಕವನ್ನು ಖಾಯಂ ಗೊಳಿಸಬೇಕೆಂದು ಕೋರ್ಟ್ ಆಫ್ ಡೈರೆಕ್ಟರುಗಳು ಆಶಿಸಿದ್ದರು. ಆದರೆ ಭಾರತದ ಮುದ್ರಣಾಲಯಗಳಿಗೆ ಯಾವ ನಿರ್ಬಂಧಕೊಡದೆಂಬ ಹೊಸ ಕಾಯಿದೆಯನ್ನು ಮಂಡಿಸಿದ್ದರ ಪರಿಣಾಮವಾಗಿ ಅವರ ನಂಬಿಕೆಯನ್ನು ಕಳೆದು ಕೊಂಡ. ಪರಿಣಾಮವಾಗಿ ಬ್ರಿಟಿಷ್ ಸರ್ಕಾರ ಇವನನ್ನು ಗವರ್ನರ್ ಜನರಲ್ ಹುದ್ದೆಯಲ್ಲಿ ಉಳಿಸಿಕೊಳ್ಳಲು ಸಮ್ಮತಿಸಲಿಲ್ಲ. ಲಾರ್ಡ್ ಆಕ್ಲೆಂಡನನ್ನು (1836-42) ಆ ಸ್ಥಾನದಲ್ಲಿ ನೇಮಕಮಾಡಿತು. ಅನಂತರ ಮೆಟಕಾಫ್ ವಾಯುವ್ಯ ಪ್ರಾಂತ್ಯದ ಲೆಫ್ಟಿನೆಂಟ ಗವರ್ನರ್ ಜನರಲ್ ಹುದ್ದೆಯನ್ನು ಒಪ್ಪಿಕೊಂಡ. ಈತನನ್ನು ಮದರಾಸಿಗೆ ಗವರ್ನರ್ ಆಗಿ ಕಳುಹಿಸುವ ಸಂದರ್ಭದಲ್ಲಿ ಕೋರ್ಟ್ ಆಫ್ ಡೈರೆಕ್ಟರುಗಳ ನಂಬಿಕೆಯನ್ನು ತಾನು ಕಳೆದುಕೊಂಡಿರುವುದರ ಸಂಗತಿ ತಿಳಿದುಬಂದು ಅದರಿಂದ ಬೇಸರಗೊಂಡು ಆ ಹುದ್ದೆಯನ್ನು ಒಪ್ಪಿಕೊಳ್ಳದೆ 1838 ರಲ್ಲಿ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ತೆರಳಿದ. ಮರುವರ್ಷ ಜಮೈಕದ ಗವರ್ನರ್ ಆಗಿ ನೇಮಕಗೊಂಡ. ನೀಗ್ರೋಗಳ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿ ನ್ಯಾಯಾಂಗದ ಕಾರ್ಯಚಟುವಟಿಕೆಯನ್ನು ಸರಿಪಡಿಸಿದ. ಅನಾರೋಗ್ಯದ ಕಾರಣವಾಗಿ 1842 ರಲ್ಲಿ ಈ ಹುದ್ದೆಗೂ ರಾಜೀನಾಮೆ ನೀಡಿ ಮತ್ತೆ ಇಂಗ್ಲೆಂಡಿಗೆ ಮರಳಿದ. ಪುನಃ 1843 ರಲ್ಲಿ ಕೆನಡದ ಗವರ್ನರ್ ಪದವಿಯನ್ನು ಒಪ್ಪಿಕೊಂಡ. ಮಹತ್ತ್ವಪೂರ್ಣ ಸೇವೆಗಾಗಿ ಈತನಿಗೆ 1845 ರಲ್ಲಿ ಬ್ಯಾರೊನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 5 ಸೆಷ್ಟೆಂಬರ್ 1846 ರಂದು ಹ್ಯಾಮ್‍ಷೈರ್‍ನಲ್ಲಿ ತನ್ನ 61ನೆಯ ವಯಸ್ಸಿನಲ್ಲಿ ಈತ ನಿಧನಹೊಂದಿದ.
(ಬಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ